Skip to main content
Maya Mukti Logo
MAYA MUKTI
ಸ್ವಯಂ ಅರಿವು
Vedantic Parable•3 min read

ಸಾವಿಗೆ ಹೆದರುವುದಲ್ಲ, ಸಾವಿನ ಆಚೆಗಿನ ಅಸಲಿ ಸತ್ಯವನ್ನು ಅರಿಯುವುದೇ ನಿಜವಾದ 'ಮಾಯಾ ಮುಕ್ತಿ'

ಶ್ರೀ ರಾಂ
ಶ್ರೀ ರಾಂVedantic Wisdom Tradition
ಸಾವಿಗೆ ಹೆದರುವುದಲ್ಲ, ಸಾವಿನ ಆಚೆಗಿನ ಅಸಲಿ ಸತ್ಯವನ್ನು ಅರಿಯುವುದೇ ನಿಜವಾದ 'ಮಾಯಾ ಮುಕ್ತಿ'
ವಾಜಶ್ರವಸನು ವಿಶ್ವಜಿತ್ ಯಾಗವನ್ನು ಮುಗಿಸಿ, ತನಗೆ ಇನ್ನು ಉಪಯೋಗಕ್ಕೆ ಬಾರದ, ನೀರು ಕುಡಿಯಲೂ ಶಕ್ತಿಯಿಲ್ಲದ, ಹುಲ್ಲು ಮೇಯಲಾಗದ ಮುದುಕಾದ ಹಸುಗಳನ್ನು ದಾನ ನೀಡುತ್ತಿದ್ದನು. ಅಲ್ಲಿಯೇ ನಿಂತಿದ್ದ ಬಾಲಕ ನಚಿಕೇತನಿಗೆ ಅರಿವಾಯಿತು—*"ತನ್ನ ಬಳಿಯಿರುವ ಅತ್ಯಂತ ಪ್ರಿಯವಾದದ್ದನ್ನು ತ್ಯಾಗ ಮಾಡದಿದ್ದರೆ ಈ ಯಾಗಕ್ಕೆ ಯಾವ ಅರ್ಥವೂ ಇಲ್ಲ."* ಆತ ತಂದೆಯ ಬಳಿ ಹೋಗಿ ನೇರವಾಗಿ ಕೇಳಿದ: "ಅಪ್ಪಾ, ನನ್ನನ್ನು ಯಾರಿಗೆ ದಾನ ಕೊಡುತ್ತೀ?" ತಂದೆ ಉತ್ತರಿಸಲಿಲ್ಲ. ನಚಿಕೇತ ಎರಡನೇ ಬಾರಿಯೂ ಕೇಳಿದ. ಮೂರನೇ ಬಾರಿ ಕೇಳಿದಾಗ ಕೋಪಗೊಂಡ ತಂದೆ ಉದ್ಗರಿಸಿದ: *"ನಿನ್ನನ್ನು ಯಮನಿಗೆ ಕೊಡುತ್ತೇನೆ!"* ತಂದೆಯ ಮಾತನ್ನು ಮುರಿಯದ ನಚಿಕೇತ, ನೇರವಾಗಿ ಯಮಲೋಕಕ್ಕೆ ತೆರಳಿದ. ಅಲ್ಲಿ ಯಮಧರ್ಮರಾಯ ಇರಲಿಲ್ಲ. ಯಾವ ಅತಿಥಿ ಸತ್ಕಾರವೂ ಇಲ್ಲದೆ, ಒಂದು ಹನಿ ನೀರನ್ನೂ ಕುಡಿಯದೆ, ಮೂರು ರಾತ್ರಿಗಳು ಯಮನ ಬಾಗಿಲಲ್ಲಿ ಸಾವಿಗಾಗಿ ಕಾಯ್ದು ನಿಂತನು! ಮೂರು ದಿನಗಳ ನಂತರ ಹಿಂತಿರುಗಿದ ಯಮಧರ್ಮರಾಯ, ಕಾಯುತ್ತಿದ್ದ ಬ್ರಾಹ್ಮಣ ಬಾಲಕನನ್ನು ಕಂಡು ಹೇಳಿದ: *"ಹೇ ಬಾಲಕನೇ, ಮೂರು ರಾತ್ರಿ ನನ್ನ ಬಾಗಿಲಲ್ಲಿ ಉಪವಾಸ ಕುಳಿತಿದ್ದೀಯಾ. ನಿನಗೆ ನಮಸ್ಕರಿಸುತ್ತೇನೆ. ನಿನ್ನನ್ನ ಕಾಯುವಂತೆ ಮಾಡಿದ್ದಕ್ಕೆ ಪ್ರತಿಯೊಂದು ರಾತ್ರಿಗೆ ಒಂದರಂತೆ ಮೂರು ವರಗಳನ್ನು ಕೇಳಿಕೊ."* ಮೊದಲನೇ ವರ: *"ನನ್ನ ತಂದೆಯ ಕೋಪ ಶಮನವಾಗಿ, ನಾನು ಹಿಂತಿರುಗಿದಾಗ ಅವರು ನನ್ನನ್ನು ಪ್ರೀತಿಯಿಂದ ಸ್ವೀಕರಿಸಲಿ."* (ಯಮ 'ತಥಾಸ್ತು' ಎಂದನು) ಎರಡನೇ ವರ:* "ಸ್ವರ್ಗ ತಲುಪಿಸುವ, ದುಃಖವನ್ನು ದಾಟಿಸುವ ಆ ದಿವ್ಯ ಅಗ್ನಿವಿದ್ಯೆಯನ್ನು ಬೋಧಿಸು."* (ಯಮ ಅದನ್ನೂ ಕಲಿಸಿದನು) ಆದರೆ ಮೂರನೇ ವರವನ್ನು ಕೇಳುವಾಗ ನಚಿಕೇತನ ಕಣ್ಣುಗಳಲ್ಲಿ ಅಂಜಿಕೆಯಿರಲಿಲ್ಲ. ಆತ ಯಮನ ಕಣ್ಣುಗಳನ್ನು ನೇರವಾಗಿ ನೋಡಿ ಕೇಳಿದ: *ಯಮದೇವನೇ, ಮನುಷ್ಯನು ಮರಣ ಹೊಂದಿದಾಗ ಒಂದು ದೊಡ್ಡ ಸಂಶಯ ಏಳುತ್ತದೆ—ಒಬ್ಬರು 'ಆತ ಇಲ್ಲ ಸತ್ತುಹೋದ' ಎನ್ನುತ್ತಾರೆ. ಇನ್ನೊಬ್ಬರು 'ಆತ ದೇಹ ಬಿಟ್ಟ , ಆದರೆ ಜೀವಂತವಾಗಿದ್ದಾನೆ' ಎನ್ನುತ್ತಾರೆ. ಈ ಸಾವಿನ ಆಚೆಗಿನ ಸತ್ಯವೇನು? ಆತ್ಮ ಎನ್ನುವುದಿದೆಯೇ? ನನಗೆ ಈ ಜ್ಞಾನವನ್ನು ನೀಡು!* ಯಮಧರ್ಮರಾಯ ಆಶ್ಚರ್ಯಗೊಂಡನು. ಸಾಕ್ಷಾತ್ ದೇವತೆಗಳಿಗೂ ಸಿಗದ ಈ ರಹಸ್ಯವನ್ನು ಸಣ್ಣ ಬಾಲಕನಿಗೆ ಬಿಟ್ಟುಕೊಡಲು ಆತನಿಗೆ ಇಷ್ಟವಿರಲಿಲ್ಲ. ಯಮ ತಕ್ಷಣ ಆತನನ್ನು ದಾರಿ ತಪ್ಪಿಸಲು ದೊಡ್ಡ ಆಮಿಷಗಳನ್ನೇ ಒಡ್ಡಿದನು: *"ನಚಿಕೇತಾ, ಈ ಪ್ರಶ್ನೆಯನ್ನು ಬಿಟ್ಟುಬಿಡು! ನಿನಗೆ ನೂರು ವರ್ಷ ಬಾಳುವ ಪುತ್ರ-ಪೌತ್ರರನ್ನು ಕೊಡುತ್ತೇನೆ. ಕೋಟ್ಯಾಂತರ ಆನೆ, ಕುದುರೆ, ಬಂಗಾರ, ವಿಶಾಲವಾದ ಭೂಮಿಯ ಸಾಮ್ರಾಜ್ಯವನ್ನು ಕೊಡುತ್ತೇನೆ. ಸ್ವರ್ಗದಿಂದ ಅಪ್ಸರೆಯರನ್ನು ಕಳುಹಿಸುತ್ತೇನೆ. ನಿನಗೆ ಎಷ್ಟು ವರ್ಷ ಬೇಕೋ ಅಷ್ಟು ವರ್ಷ ಬದುಕು! ಆದರೆ ಸಾವಿನ ರಹಸ್ಯವನ್ನು ಮಾತ್ರ ಕೇಳಬೇಡ!"* ಆಗ ನಚಿಕೇತ ನಕ್ಕು ಹೇಳಿದ ಅದ್ಭುತ ಮಾತುಗಳು ಇಡೀ ವೇದಾಂತದ ತಳಹದಿ: *"ಹೇ ಯಮನೇ! ನೀನು ನೀಡುವ ಈ ಭೋಗಗಳೆಲ್ಲವೂ 'ಶ್ವೇೂಭಾವಾಃ' (ನಾಳೆಗೆ ಇರುವುದಿಲ್ಲ!). ಇವು ಮನುಷ್ಯನ ಇಂದ್ರಿಯಗಳ ತೇಜಸ್ಸನ್ನು ಕ್ಷೀಣಿಸುತ್ತವೆ. ಈ ಇಡೀ ಭೂಮಂಡಲದ ಆಯುಷ್ಯವೂ ಸಾವಿನ ಮುಂದೆ ಅತ್ಯಲ್ಪ! ನಿನ್ನ ಕುದುರೆಗಳು, ನಿನ್ನ ಆಟ-ಪಾಟಗಳು, ನಿನ್ನ ಅಪ್ಸರೆಯರು ನಿನ್ನಲ್ಲೇ ಇರಲಿ! ಮನುಷ್ಯನಿಗೆ ಧನದಿಂದ ಎಂದಿಗೂ ತೃಪ್ತಿ ಸಿಗಲಾರದು. ನನಗೆ ಕ್ಷಣಿಕವಾದದ್ದು ಯಾವುದೂ ಬೇಡ. ನನಗೆ ಬೇಕಾಗಿರುವುದು ಆ 'ಶಾಶ್ವತ ಸತ್ಯ' ಮಾತ್ರ!"* ನಚಿಕೇತನ ಈ ಅಚಲ ಶ್ರದ್ಧೆ ಮತ್ತು ವೈರಾಗ್ಯವನ್ನು ಕಂಡ ಯಮಧರ್ಮರಾಯ ಸೋತನು. ಆತನಿಗೆ 'ಶ್ರೇಯಸ್ಸು' (ಆತ್ಮಜ್ಞಾನ) ಮತ್ತು 'ಪ್ರೇಯಸ್ಸು'ಗಳ (ಲೌಕಿಕ ಆಸೆ) ನಡುವಿನ ವ್ಯತ್ಯಾಸವನ್ನು ವಿವರಿಸಿ, ಓಂಕಾರದ ರಹಸ್ಯ ಹಾಗೂ "ಆತ್ಮ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ದೇಹ ಸತ್ತರೂ ಇದು ಸಾಯುವುದಿಲ್ಲ" ಎಂಬ ಅಮರ ಜ್ಞಾನವನ್ನು ಧಾರೆ ಎರೆದನು. *ನನ್ನ ಅನಿಸಿಕೆ:* ನಮಗೂ ಮತ್ತು ನಚಿಕೇತನಿಗೂ ಇರುವ ಒಂದೇ ವ್ಯತ್ಯಾಸ—*'ವೈರಾಗ್ಯ'.* ಯಮಧರ್ಮರಾಯ ನಮಗೂ ಪ್ರತಿದಿನ ಲೌಕಿಕ ಸುಖ-ಸಂಪತ್ತು, ಹೆಸರು, ಪ್ರಸಿದ್ಧಿ, ದೈಹಿಕ ಸುಖ, ಕಂಫರ್ಟ್ ಜೋನ್ ಎಂಬ ಆಮಿಷಗಳನ್ನು ಒಡ್ಡುತ್ತಲೇ ಇದ್ದಾನೆ. ನಾವೆಲ್ಲರೂ ಆ *'ಪ್ರೇಯಸ್ಸಿನ*' (ಆಮಿಷಗಳ) ಬಲೆಯಲ್ಲಿ ಸಿಲುಕಿ, ಸಾವಿನ ಕಡೆಗೆ ಓಡುತ್ತಿದ್ದೇವೆ. ಆದರೆ ನಚಿಕೇತನಂತೆ "*ಇವೆಲ್ಲವೂ ನಾಳೆಗೆ ಕರಗಿಹೋಗುವ ಮಾಯೆ! ನನಗೆ ಬೇಕಾಗಿರುವುದು ನನ್ನ ಮೂಲ ಸ್ವರೂಪವಾದ ಅಖಂಡ ಚೈತನ್ಯ!*" ಎಂದು ಕಂಫರ್ಟ್ ಜೋನ್ ಬಿಟ್ಟು ಹೊರಬಂದಾಗ ಮಾತ್ರ ನಮಗೆ ಆತ್ಮಜ್ಞಾನ ಲಭಿಸಲು ಸಾಧ್ಯ. ಸಾವಿಗೆ ಹೆದರುವುದಲ್ಲ, ಸಾವಿನ ಆಚೆಗಿನ ಅಸಲಿ ಸತ್ಯವನ್ನು ಅರಿಯುವುದೇ ನಿಜವಾದ '*ಮಾಯಾ ಮುಕ್ತಿ'.* ಮಾಯಾ ಮುಕ್ತಿ - ಅರಿವಿನ ಪಥ 🚩