Skip to main content
Maya Mukti Logo
MAYA MUKTI
ಸ್ವಯಂ ಅರಿವು
Vedantic Parable•4 min read

ಫಲದ ಆಸೆ ಬಿಡಿ, ಕೆಲಸವನ್ನೇ ಪ್ರೀತಿಸಿ: ಕುಮಾರ್‌ನ ಅರಿವಿನ ಪಯಣ

ಸುವರ್ಣ
ಸುವರ್ಣVedantic Wisdom Tradition
ಫಲದ ಆಸೆ ಬಿಡಿ, ಕೆಲಸವನ್ನೇ ಪ್ರೀತಿಸಿ: ಕುಮಾರ್‌ನ ಅರಿವಿನ ಪಯಣ
ರಾತ್ರಿಯ ನಿಶ್ಶಬ್ದದಲ್ಲಿ ಲ್ಯಾಪ್‌ಟಾಪ್‌ನ ಪರದೆಯ ಬೆಳಕು ಕುಮಾರ್‌ನ ಮುಖದ ಮೇಲೆ ಬೀಳುತ್ತಿತ್ತು. ಸಮಯ ರಾತ್ರಿ 11:3೦. ಕಣ್ಣುಗಳು ಕೆಂಪಗಾಗಿವೆ, ಆದರೆ ನಿದ್ದೆಯ ಸುಳಿವೇ ಇಲ್ಲ. ಅವನ ಮನಸ್ಸಿನಲ್ಲಿ ಆಲೋಚನೆಗಳ ಜಾತ್ರೆ. "ಈ ತಿಂಗಳು ಇಎಂಐ ಕಟ್ಟಬೇಕು, ಆಫೀಸ್ ಪ್ರಾಜೆಕ್ಟ್‌ನಲ್ಲಿ ಪ್ರಮೋಷನ್ ಸಿಗುತ್ತಾ? ಇಲ್ಲದಿದ್ದರೆ ನಾನು ಸೋತಹಾಗೆ. ನನ್ನ ಫ್ರೆಂಡ್ಸ್ ನೋಡಿ, ಎಲ್ಲರೂ ಫಾರಿನ್‌ನಲ್ಲಿ ಚೆನ್ನಾಗಿದ್ದಾರೆ, ನಾನು ಇಲ್ಲೇ ಸಿಕ್ಕಿಹಾಕಿಕೊಂಡಿದ್ದೀನಾ?" ಎಂದು ಅವನ ಮನಸ್ಸು ಪದೇ ಪದೇ ಅದೇ ವಿಷವರ್ತುಲದಲ್ಲಿ ಸುತ್ತುತ್ತಿತ್ತು. ಕೆಲಸ ಮಾಡಬೇಕು, ಆದರೆ ಆತಂಕ (Anxiety) ಅವನನ್ನು ಕೆಲಸ ಮಾಡಲು ಬಿಡುತ್ತಿರಲಿಲ್ಲ. ಅವನ ಮೆದುಳು ಅತಿಯಾದ ಯೋಚನೆಯಿಂದ 'ಹ್ಯಾಂಗ್' ಆಗಿತ್ತು. ಶಾಂತಿಗಾಗಿ ಕುಮಾರ್ ಒಬ್ಬ ಅನುಭವಿ ಮಾರ್ಗದರ್ಶಿಯ ಬಳಿ ಹೋದ. *ಸರ್, ನನಗೆ ನೆಮ್ಮದಿಯೇ ಇಲ್ಲ. ನಾನು ಜೀವನದಲ್ಲಿ ಗೆಲ್ಲಲೇಬೇಕು, ಆದ್ರೆ ಆ ಜೀವನದ ಬಗ್ಗೆ ಯೋಚಿಸ್ತಾ ಯೋಚಿಸ್ತಾ ನಾನು ಸಾಯ್ತಿದ್ದೀನಿ. ನನ್ನ ಮನಸ್ಸಿಗೆ ನೆಮ್ಮದಿ ಇಲ್ಲ, ಇದಕ್ಕೊಂದು ಸೊಲ್ಯೂಷನ್ ಕೊಡಿ,* ಎಂದು ಕೇಳಿದ. ಗುರೂಜಿ ನಕ್ಕರು. ಏನೂ ಮಾತನಾಡದೆ ಅವನನ್ನು ತೋಟದ ಕಡೆ ಕರೆದೊಯ್ದರು. ಅಲ್ಲಿ ದೊಡ್ಡದಾದ ನೀರಿನ ಟ್ಯಾಂಕ್ ಇತ್ತು, ಅದು ಪೂರ್ತಿ ತುಂಬಿತ್ತು. ಗುರೂಜಿ ಅವನ ಕೈಗೆ ಒಂದು ಸಣ್ಣ ಕಪ್ ಕೊಟ್ಟರು. *ಕುಮಾರ್, ಈ ಟ್ಯಾಂಕ್‌ನಲ್ಲಿರೋ ನೀರನ್ನೆಲ್ಲ ಈ ಸಣ್ಣ ಕಪ್‌ನಲ್ಲಿ ಎತ್ತಿ ಖಾಲಿ ಮಾಡಬೇಕು,* ಎಂದರು. ಕುಮಾರ್‌ಗೆ ತರ್ಕಬದ್ಧವಾಗಿ ಇದು ಅಸಾಧ್ಯವೆಂದು ಅನ್ನಿಸಿತು. *ಎಂತಹ ವಿಚಿತ್ರ ಕೆಲಸ ಇದು! ಇಷ್ಟು ದೊಡ್ಡ ಟ್ಯಾಂಕ್, ಈ ಪುಟ್ಟ ಕಪ್‌ನಲ್ಲಿ ಯಾವಾಗ ಖಾಲಿ ಮಾಡೋದು? ನನ್ನ ಟೈಮ್ ಎಷ್ಟು ಬೆಲೆಬಾಳುತ್ತೆ ಅಂತ ಇವರಿಗೆ ಗೊತ್ತಿಲ್ವಾ? ಬೇಗ ಈ ಕೆಲಸ ಮುಗಿಸಿ ಸಕ್ಸಸ್ ಆಗಬೇಕಾದವನು ನಾನು, try ಮಾಡಿ ನೋಡೋಣ* ಎಂದುಕೊಳ್ಳುತ್ತಾ ಕೆಲಸಕ್ಕೆ ಕೈ ಹಾಕಿದ. ಅವನು ನೀರು ಸುರಿಯಲು ಶುರು ಮಾಡಿದ. ಆದರೆ ಅವನ ಕಣ್ಣುಗಳೆಲ್ಲ ಟ್ಯಾಂಕ್‌ ಮೇಲೆಯೇ ಇದ್ದವು. *ಇನ್ನೂ ಎಷ್ಟು ನೀರು ಬಾಕಿ ಇದೆ? ಅರ್ಧ ಗಂಟೆ ಆಯ್ತು, ಟ್ಯಾಂಕ್‌ನ ನೀರು ಕಮ್ಮಿ ಆಗ್ತಿಲ್ಲವಲ್ಲಾ! ಈ ಕೆಲಸ ಮಾಡೋದ್ರಿಂದ ನನ್ನ ಲೈಫ್‌ನಲ್ಲಿ ಏನು ಲಾಭ?* ಎಂದು ಮನಸ್ಸಿನಲ್ಲಿಯೇ ಗೊಣಗುತ್ತಾ ನೀರು ಸುರಿಯುತ್ತಿದ್ದ. ಗಂಟೆಗಳೇ ಕಳೆದವು, ಟ್ಯಾಂಕ್‌ನ ನೀರು ಹಾಗೆಯೇ ಇತ್ತು. ಕುಮಾರ್ ಹತಾಶನಾಗಿ ಲೋಟವನ್ನು ಎಸೆದ. ಗುರೂಜಿ ನೋಡಿ ಹತ್ತಿರ ಬಂದು ಅವನ ಭುಜದ ಮೇಲೆ ಕೈ ಇಟ್ಟರು. *ಕುಮಾರ್, ನೀನು ನೀರನ್ನು ಖಾಲಿ ಮಾಡ್ತಿದ್ದೀಯಾ, ಆದ್ರೆ ನಿನ್ನ 'ನಾನು' (Ego) ಅನ್ನೋ ಅಹಂಕಾರವನ್ನು ಖಾಲಿ ಮಾಡ್ತಿಲ್ಲ. ನಾನು ಗೆಲ್ಲಬೇಕು, ನನಗೆ ರಿಸಲ್ಟ್ ಬೇಕು ಅನ್ನೋ ಹಠ ನಿನ್ನ ಸ್ಟ್ರೆಸ್‌ಗೆ ಕಾರಣ. ರಿಸಲ್ಟ್ ಬಗ್ಗೆ ಯೋಚಿಸುವಾಗ ನಿನ್ನ ಮೆದುಳಿನ ಶಕ್ತಿ ವ್ಯರ್ಥ ಆಗುತ್ತೆ,* ಎಂದು ಗೀತೆಯ ಮಂತ್ರವನ್ನು ನೆನಪಿಸಿದರು: *ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ* *ಕೆಲಸ ಮಾಡೋದು ನಿನ್ನ ಅಧಿಕಾರ, ಅದರ ಫಲ ನಿನ್ನ ಕೈಲಿಲ್ಲ. ರಿಸಲ್ಟ್ ಬಗ್ಗೆ ಯೋಚಿಸೋದನ್ನು ಬಿಟ್ಟು, ಮಾಡ್ತಿರೋ ಕೆಲಸದ ಮೇಲೆ ಫೋಕಸ್ ಮಾಡು,* ಎಂದು ಗುರೂಜಿ ಹೇಳಿದರು. ಕುಮಾರ್ ಒಂದು ದೀರ್ಘ ಉಸಿರು ತೆಗೆದುಕೊಂಡ. ಅಹಂಕಾರವನ್ನು ಪಕ್ಕಕ್ಕಿಟ್ಟ. ಈಗ ಅವನಿಗೆ ರಿಸಲ್ಟ್ ಬೇಕಿರಲಿಲ್ಲ, ಕೇವಲ ನೀರನ್ನು ಸುರಿಯುವುದು ಮುಖ್ಯವಾಗಿತ್ತು. ಅವನು ಲೋಟವನ್ನು ಟ್ಯಾಂಕ್‌ಗೆ ಹಾಕಿದ. ಆಗ ಅವನ ಕಿವಿಗೆ ಒಂದು ವಿಚಿತ್ರವಾದ, ಆನಂದದಾಯಕವಾದ ಶಬ್ದ ಕೇಳಿಸಿತು. ಟ್ಯಾಂಕ್‌ನಿಂದ ನೀರು ಸುರಿಯುವ ಆ 'ಜಲ್‌-ಜಲ್' ಶಬ್ದ ಅವನಿಗೆ ಸಂಗೀತದಂತೆ ಕೇಳಿಸಿತು. ಅವನ ಕಿವಿಗೆ ಬಿದ್ದ ನೀರಿನ ಆ ಲಯಬದ್ಧ ಶಬ್ದ ಅವನ ಮನಸ್ಸನ್ನು ಶಾಂತಗೊಳಿಸಿತು. ಈಗ ಅವನು ಸಮಯವನ್ನು ಮರೆತಿದ್ದ. *ಎಷ್ಟು ಹೊತ್ತಾಯಿತು?, ಇನ್ನು ಎಷ್ಟು ಕೆಲಸ ಬಾಕಿ ಇದೆ?* ಅನ್ನೋ ಯೋಚನೆಗಳು ಅವನ ಮನಸ್ಸಿನಿಂದ ಕಣ್ಮರೆಯಾದವು. ಅವನು ಸಂಪೂರ್ಣವಾಗಿ ಆ ನೀರಿನ ಸುರಿಯುವ ಕ್ರಿಯೆಯಲ್ಲಿ ಲೀನವಾಗಿದ್ದ. ಪ್ರತಿಯೊಂದು ಹನಿ ನೀರು ಲೋಟದಿಂದ ಪಾತ್ರೆಗೆ ಬೀಳುವಾಗ ಉಂಟಾಗುತ್ತಿದ್ದ ಆ ಸಂಗೀತವನ್ನು ಅವನು ಆಸ್ವಾದಿಸುತ್ತಿದ್ದ. ಅವನು ಸಂಪೂರ್ಣವಾಗಿ 'ಪ್ರಸ್ತುತ ಕ್ಷಣ'ದಲ್ಲಿ (Present Moment) ಬದುಕುತ್ತಿದ್ದ. ಅವನಿಗೆ ಅರಿವೇ ಆಗಲಿಲ್ಲ! ಸಮಯ ಹೇಗೆ ರೆಕ್ಕ ಬಿಚ್ಚಿ ಹಾರಿ ಹೋಯಿತು, ಎಷ್ಟು ಹೊತ್ತು ಕೆಲಸ ಮಾಡಿದೆ, ಯಾವುದೂ ಅವನಿಗೆ ಗೊತ್ತಿಲ್ಲ. ತಾನು ಕೇವಲ ಆ ಸುರಿಯುವ ನೀರಿನ ಸಂಗೀತದಲ್ಲಿ ಮಗ್ನನಾಗಿದ್ದೆ. ಅಚ್ಚರಿಯೆಂಬಂತೆ, ಕಣ್ಣು ತೆರೆದು ನೋಡುವಾಗ ಟ್ಯಾಂಕ್ ಖಾಲಿಯಾಗಿತ್ತು! ಗುರೂಜಿ ಅವನ ಕಡೆ ನೋಡಿದರು. ಕುಮಾರ್‌ನ ಮುಖದಲ್ಲಿ ಈಗ ಆತಂಕವಿರಲಿಲ್ಲ, ಒಂದು ವಿಧವಾದ ತೃಪ್ತಿ ಇತ್ತು. *ಸರ್, ನನಗೆ ಅರ್ಥವಾಯ್ತು. ನಾನು ಟ್ಯಾಂಕ್ ಖಾಲಿ ಮಾಡೋಕೆ ಹೋಗಿ ನನ್ನ ಮನಸ್ಸಿನ ಅಶಾಂತಿಯನ್ನೇ ಹೆಚ್ಚಿಸಿಕೊಂಡಿದ್ದೆ. ರಿಸಲ್ಟ್ ಬಗ್ಗೆ ಯೋಚಿಸದಿದ್ದಾಗ, ಕೆಲಸವೇ ಒಂದು ಧ್ಯಾನವಾಗುತ್ತೆ ಅಂತ ಈಗ ತಿಳಿಯಿತು,* ಎಂದ. ಮಧ್ಯಮ ವರ್ಗದ ಬದುಕಿನ ಒತ್ತಡಗಳಲ್ಲಿ ನಾವೆಲ್ಲರೂ ಕುಮಾರ್‌ನಂತೆ ಓಡುತ್ತಿದ್ದೇವೆ. ನೆನಪಿಡಿ, ರಿಸಲ್ಟ್ ಬಗ್ಗೆ ಯೋಚಿಸುವುದು ನಿಮ್ಮ ಕೆಲಸವಲ್ಲ, ಅದು ಕಾಲದ ಕೆಲಸ. ನಿಮ್ಮ ಕೆಲಸವೆಂದರೆ ಇವತ್ತು ನಿಮ್ಮ ಮುಂದೆ ಇರೋ ಕೆಲಸವನ್ನು ಅಚ್ಚುಕಟ್ಟಾಗಿ, ಸಂಪೂರ್ಣ ಗಮನವಿಟ್ಟು ಮಾಡುವುದು. ಆ ಕೆಲಸದ ಪ್ರಕ್ರಿಯೆಯನ್ನು ಆನಂದಿಸಿ, ಕೆಲಸದ ಸಂಗೀತವನ್ನು ಆಲಿಸಿ. ಆಗ ನೋಡಿ, ಟ್ಯಾಂಕ್ ಖಾಲಿಯಾಗುತ್ತೋ ಇಲ್ವೋ ಗೊತ್ತಿಲ್ಲ, ಆದರೆ ನಿಮ್ಮ ಜೀವನ ಖಂಡಿತವಾಗಿ ಸುಂದರವಾಗುತ್ತೆ!...