Skip to main content
Maya Mukti Logo
MAYA MUKTI
ಸ್ವಯಂ ಅರಿವು
Vedantic Parable•3 min read

ನಮ್ಮ ಆಲೋಚನೆಗಳಲ್ಲಿ ಅಡಗಿದೆ ನಮ್ಮ ಜೀವನದ ಭವಿಷ್ಯ

Jyothi shetty
Jyothi shettyVedantic Wisdom Tradition
ನಿಮ್ಮ ಆತ್ಮಶಕ್ತಿಯನ್ನು ವೃದ್ಧಿಸಿ ಎಂಬ ವಿಷಯದ ಕುರಿತಾದ ಬಿ.ಕೆ. ಶಿವಾನಿ ಅವರ ಉಪನ್ಯಾಸ ಮಾಲಿಕೆಯ ಆಯ್ದ ಭಾಗ) ಕೆಲವರು ಜೀವನವನ್ನು ಸಂಕೀರ್ಣಗೊಳಿಸಿಕೊಳ್ಳುತ್ತಾರೆ. ಏಕೆಂದರೆ ಅವರು ಪ್ರತಿಯೊಂದು ಘಟನೆಯ ಮೇಲೂ ತಮ್ಮ ನಿರೀಕ್ಷೆಯ ನೆರಳನ್ನು ಬೀರುತ್ತಾರೆ. ಎಲ್ಲರೂ ನನ್ನ ಮಾತಿನಂತೆ ನಡೆದುಕೊಳ್ಳಬೇಕು, ಎಲ್ಲವೂ ನನ್ನ ಯೋಜನೆಯಂತೆ ನಡೆಯಬೇಕು, ಎಲ್ಲರೂ ನನ್ನನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ನಿರೀಕ್ಷೆ ಮನಸ್ಸಿನಲ್ಲಿ ಮನೆ ಮಾಡುತ್ತದೆ. ಆದರೆ ಬದುಕು ಎಂದಿಗೂ ನಮ್ಮ ಕಲ್ಪನೆಯ ನಕಲು ಆಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಅನುಭವ, ತನ್ನದೇ ಆದ ಚಿಂತನೆ ಮತ್ತು ತನ್ನದೇ ಆದ ಬದುಕಿನ ಪಯಣವಿದೆ. ಅವರನ್ನು ಬದಲಾಯಿಸಲು ಹೊರಡುವ ಬದಲು, ಅವರನ್ನು ಅವರಂತೆಯೇ ಸ್ವೀಕರಿಸಲು ಕಲಿತಾಗ ಮನಸ್ಸು ಹಗುರವಾಗುತ್ತದೆ. ನಿರೀಕ್ಷೆಗಳು ಹೆಚ್ಚಾದಷ್ಟೂ ನೋವು ಹೆಚ್ಚಾಗುತ್ತದೆ. ಆದರೆ 'ಸ್ವೀಕಾರ' ಹೆಚ್ಚಾದಷ್ಟೂ ಶಾಂತಿ ಹೆಚ್ಚಾಗುತ್ತದೆ. 'ಸ್ವೀಕಾರ' ಎಂದರೆ ತಪ್ಪನ್ನು ಸಮರ್ಥಿಸುವುದಲ್ಲ; ಅದು ನಮ್ಮ ಮನಸ್ಸನ್ನು ಅನಗತ್ಯ ನೋವಿನಿಂದ ರಕ್ಷಿಸಿಕೊಳ್ಳುವ ಜ್ಞಾನ. ನಮ್ಮದೇಹ ಮತ್ತು ಮನಸ್ಸು ಒಂದಕ್ಕೊಂದು ಸಂಬಂಧಿಸಿಲ್ಲ ಎಂದು ಭಾವಿಸುವುದು ತಪ್ಪು. ಇಂದು ವೈದ್ಯಕೀಯ ಸಂಶೋಧನೆಗಳು ಇದನ್ನೇ ಹೇಳುತ್ತಿವೆ. ನಿರಂತರವಾದ ಒತ್ತಡ, ಕೋಪ, ದ್ವೇಷ, ಆತಂಕ ಮತ್ತು ಅಸಮಾಧಾನ.. `ಇವೆಲ್ಲವೂ ದೇಹದ ಮೇಲೆ ಪರಿಣಾಮ ಬೀರುತ್ತವೆ. ಮನಸ್ಸಿನಲ್ಲಿ ವರ್ಷಗಳಿಂದ ಸಂಗ್ರಹವಾಗಿರುವ ನೋವು ನಿಧಾನವಾಗಿ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳಾಗಿ ವ್ಯಕ್ತವಾಗಬಹುದು. ನಾವು ಔಷಧಗಳ ಮೂಲಕ ದೇಹಕ್ಕೆ ಚಿಕಿತ್ಸೆ ಕೊಡುತ್ತೇವೆ; ಆದರೆ ಮನಸ್ಸಿನ ಗಾಯಗಳನ್ನು ಗುಣಪಡಿಸುವ ಪ್ರಯತ್ನ ಕಡಿಮೆಯಾಗಿದೆ. ಮನಸ್ಸಿನೊಳಗಿನ ಅಸಮಾಧಾನ ಕರಗಿದಾಗ ಮಾತ್ರ ದೇಹಕ್ಕೂ ನಿಜವಾದ ವಿಶ್ರಾಂತಿ ಸಿಗುತ್ತದೆ. ಹಲವರು ಕೇಳುವ ಪ್ರಶ್ನೆ ಒಂದೇ 'ಇತರರು ತಪ್ಪು ಮಾಡಿದಾಗ ನಾನು ಮಾತ್ರ ಯಾಕೆ ಒಳ್ಳೆಯದಾಗಿ ಯೋಚಿಸಬೇಕು?' ಈ ಪ್ರಶ್ನೆಗೆ ಉತ್ತರ ಅತ್ಯಂತ ಸರಳ. ನಾವು ಇನ್ನೊಬ್ಬರಿಗಾಗಿ ಅಲ್ಲ ನಮ್ಮ ಶಾಂತಿಗಾಗಿ ಒಳ್ಳೆಯದಾಗಿ ಯೋಚಿಸಬೇಕು. ನಾವು ನಮ್ಮ ಆರೋಗ್ಯಕ್ಕಾಗಿ ಒಳ್ಳೆಯದಾಗಿ ಯೋಚಿಸಬೇಕು. ನಮ್ಮ ಸಂತೋಷಕ್ಕಾಗಿ ಒಳ್ಳೆಯದಾಗಿ ಯೋಚಿಸಬೇಕು. ನಮ್ಮಮನಸ್ಸಿನಲ್ಲಿಹುಟ್ಟುವ ಪ್ರತಿಯೊಂದು ಒಳ್ಳೆಯ ಭಾವನೆ ಮೊದಲು ನಮ್ಮನ್ನೇ ಸ್ಪರ್ಶಿಸುತ್ತದೆ. ಅನಂತರ ಅದು ಮತ್ತೊಬ್ಬರ ಕಡೆಗೆ ಹರಿಯುತ್ತದೆ. ಆದ್ದರಿಂದ ಕ್ಷಮೆ ಎನ್ನುವುದು ಮತ್ತೊಬ್ಬರಿಗೆ ಕೊಡುವ ಉಡುಗೊರೆಯಲ್ಲ; ಅದು ನಮ್ಮ ಹೃದಯದ ಭಾರವನ್ನು ಇಳಿಸುವ ಸಾಧನೆ. ಆಶೀರ್ವಾದ ಎನ್ನುವುದು ಕೇವಲ ಮಾತಲ್ಲ; ಅದು ನಾವು ಹೊರಹಾಕುವ ಅತ್ಯಂತ ಶಕ್ತಿಶಾಲಿ ಧನಾತ್ಮಕ ಶಕ್ತಿ. ಯಾರಾದರೂ ನಮ್ಮನ್ನು ನೋಯಿಸಿದಾಗ ಅವರ ಬಗ್ಗೆ ದ್ವೇಷ ಬೆಳೆಸಿದರೆ ಮೊದಲಿಗೆ ವಿಷ ಕುಡಿಯುವುದು ನಾವೇ. ಆದರೆ 'ಅವರಿಗೆ ಸದ್ಭುದ್ಧಿ ಬರಲಿ' ಎಂದು ಮನಃಪೂರ್ವಕವಾಗಿ ಹಾರೈಸಿದರೆ. ಮೊದಲಿಗೆ ಶಾಂತಿಯಾಗುವುದು ನಮ್ಮ ಮನಸ್ಸೇ. ಇಂದಿನ ಸಮಾಜದಲ್ಲಿ ನಾವು ಜೀವನವನ್ನು ಸರಳಗೊಳಿಸುವ ಬದಲು ಅನಗತ್ಯವಾಗಿ ಸಂಕೀರ್ಣಗೊಳಿಸುತ್ತಿದ್ದೇವೆ. ಪ್ರತಿಯೊಂದು ಸುದ್ದಿ ಸಾಮಾಜಿಕ ಜಾಲತಾಣಗಳ ಪ್ರತಿಯೊಂದು ಪೋಸ್ಟ್ ಪ್ರತಿಯೊಬ್ಬರ ಮಾತು, ಪ್ರತಿಯೊಬ್ಬರ ವರ್ತನೆ- ಎಲ್ಲದರಲ್ಲೂ ನಮ್ಮಮನಸ್ಸನ್ನು ಸಿಲುಕಿಸಿಕೊಳ್ಳುತ್ತಿದ್ದೇವೆ. ಎಲ್ಲದರ ಬಗ್ಗೆ ಅಭಿಪ್ರಾಯ ಹೊಂದಬೇಕೆಂಬ ಅನಿವಾರ್ಯತೆ ಇಲ್ಲ. ನಮ್ಮ ಬದುಕಿಗೆ ಸಂಬಂಧಿಸದ ಅನೇಕ ಹೊತ್ತುಕೊಂಡು ವಿಷಯಗಳನ್ನು ಮನಸ್ಸಿನೊಳಗೆ ತಿರುಗುವುದರಿಂದ ನಮ್ಮ ಒಳಶಕ್ತಿ ವ್ಯರ್ಥವಾಗುತ್ತದೆ. ಮನಸ್ಸು ಯಾವ ವಿಷಯಕ್ಕೆ ಶಕ್ತಿ ನೀಡಬೇಕು ಎಂಬ ಆಯ್ಕೆ ಮಾಡುವುದೂ ಒಂದು ಆಧ್ಯಾತ್ಮಿಕ ಶಿಸ್ತು ಜೀವನವನ್ನು ಸರಳಗೊಳಿಸುವುದು ಹೊರಗಿನ ಜಗತ್ತನ್ನು ಬದಲಿಸುವುದರಿಂದ ಸಾಧ್ಯವಿಲ್ಲ. ಹೊರಗಿನ ಪರಿಸ್ಥಿತಿಗಳು ಯಾವಾಗಲೂ ಬದಲಾಗುತ್ತಲೇ ಇರುತ್ತವೆ. ಆದರೆ ನಮ್ಮ ಒಳಜಗತ್ತನ್ನು ಶಾಂತವಾಗಿಟ್ಟುಕೊಳ್ಳುವ ಕಲೆ ಕಲಿತರೆ, ಅದೇ ಜಗತ್ತು ಹೊಸದಾಗಿ ಕಾಣಲು ಆರಂಭಿಸುತ್ತದೆ. ಜನರು ಬದಲಾಗುವುದಿಲ್ಲ; ಅವರನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ಸಮಸ್ಯೆಗಳು ಮಾಯವಾಗುವುದಿಲ್ಲ; ಅವುಗಳನ್ನು ಎದುರಿಸುವ ನಮ್ಮ ಶಕ್ತಿ ಹೆಚ್ಚಾಗುತ್ತದೆ. ಪ್ರತಿ ದಿನ ಬೆಳಗ್ಗೆ ನಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. ಸಂದರ್ಭಗಳ ಕೈಯಲ್ಲಿ ನಮ್ಮ ಮನಸ್ಸನ್ನು ಒಪ್ಪಿಸಿಬಿಡುವುದೋ ಅಥವಾ ನಮ್ಮ ಆಲೋಚನೆಗಳ ಮೂಲಕ ಸಂದರ್ಭಗಳಿಗಿಂತ ಮೇಲೇರಿ ಬಿಡುವುದೋ. ಮೊದಲನೆಯದು ನಮ್ಮನ್ನು ಆಯಾಸಗೊಳಿಸುತ್ತದೆ; ಎರಡನೆಯದು ನಮ್ಮನ್ನು ಆಂತರ್ಯದಿಂದ ಬಲಿಷ್ಠರನ್ನಾಗಿ ಮಾಡುತ್ತದೆ. ಅಂತಿಮವಾಗಿ, ಜೀವನದ ನಿಜವಾದ ಸಾಧನೆ ಎಂದರೆ ಹೊರಗಿನ ಯಶಸ್ಸಲ್ಲ: ನಮ್ಮೊಳಗಿನ ಶಾಂತಿ. ಮನಸ್ಸಿನಲ್ಲಿ ಶಾಂತಿ ಇದ್ದರೆ ಸಂಬಂಧಗಳು ಸುಂದರವಾಗುತ್ತವೆ, ಆರೋಗ್ಯ ಉತ್ತಮವಾಗುತ್ತದೆ, ನಿರ್ಧಾರಗಳು ಸ್ಪಷ್ಟವಾಗುತ್ತವೆ ಮತ್ತು ಬದುಕಿನ ಪ್ರತಿಯೊಂದು ದಿನವೂ ಒಂದು ಹಬ್ಬದ ಅನುಭವವಾಗುತ್ತದೆ. ಸನ್ನಿವೇಶಗಳು ನಮ್ಮನ್ನು ರೂಪಿಸುವುದಿಲ್ಲ; ನಾವು ಆಯ್ಕೆ ಮಾಡಿಕೊಳ್ಳುವ ಆಲೋಚನೆಗಳೇ ನಮ್ಮ ಜೀವನದ ಭವಿಷ್ಯವನ್ನು ರೂಪಿಸುತ್ತವೆ. ಆದ್ದರಿಂದ ಪ್ರತಿಯೊಂದು ಕ್ಷಣದಲ್ಲೂಧನಾತ್ಮಕ ಚಿಂತನೆಯನ್ನು ಆರಿಸಿಕೊಳ್ಳುವುದು ಕೇವಲ ಉತ್ತಮ ಅಭ್ಯಾಸವಲ್ಲ, ಅದು ಅತ್ಯುತ್ತಮ ಜೀವನಸಾಧನೆಯೂ ಹೌದು.