Vedantic Parable•3 min read
ನೀವೂ ಕೋಣಗಳಂತೆಯೇ...
Jyothi shettyVedantic Wisdom Tradition

ಬಾಲ ಸಿಕ್ಕಿಹಾಕಿಕೊಂಡಿರುವುದೇ ಒಂದು ಅಡ್ಡಿ!
'ಇವತ್ತು ಒಂದು ಕಥೆ .. ಗುರುಗಳ ಬಳಿ ಶಿಷ್ಯರು ಬೇಡಿದರು. 'ಆಗಬಹುದು. ಆದರೆ ಕಥೆಯ ಕೊನೆಯಲ್ಲಿ ನಾನೊಂದು ಪ್ರಶ್ನೆ ಕೇಳುತ್ತೇನೆ, ಉತ್ತರಿಸಬೇಕು' ಎಂದು ಗುರುಗಳು ಷರತ್ತು ವಿಧಿಸಿದರು. 'ಆದೀತು' ಎಂದರು ಶಿಷ್ಯರು.
ಒಂದಾನೊಂದು ಊರಿನಲ್ಲಿ ಒಂದು ಕೊಬ್ಬಿದ ಕೋಣ ಇತ್ತು. ಪ್ರತೀ ದಿನವೂ ಅದು ಮೇಯುವುದಕ್ಕಾಗಿ ಹೊಲದತ್ತ ಹೋಗುವಾಗ ದಾರಿಯಲ್ಲಿ ಒಂದು ಗುಡಿಸಲಿನ ಮುಂದಿನಿಂದ ಹಾದು ಹೋಗಬೇಕಿತ್ತು. ಆ ಗುಡಿಸಲಿನ ಛಾವಣಿಯ ಮೇಲೆ ಹಲವಾರು ಬೈಹುಲ್ಲಿನ ಸೂಡಿಗಳನ್ನು ಪೇರಿಸಿಟ್ಟಿದ್ದರು. ಕೋಣ ದಿನವೂ ಕೊರಳು ಎತ್ತರಿಸಿ ಆ ಬೈಹುಲ್ಲಿನ ಸೂಡಿಗಳು ಎಟಕುತ್ತವೆಯೇ ಎಂದು ನೋಡುವುದಿತ್ತು. ಜತೆಗೆ, ಛಾವಣಿಯ ಮೇಲೆಯೇ ಇಷ್ಟು ಸೂಡಿ ಇರಿಸಿದ್ದಾರೆ ಎಂದಾದರೆ ಗುಡಿಸಲಿನ ಒಳಗೆ ಇನ್ನಷ್ಟು ಬೈಹುಲ್ಲು ಇರಲೇಬೇಕು ಎಂದೂ ಯೋಚಿಸುತ್ತಿತ್ತು ಅದು.
ಆದರೆ ಗುಡಿಸಲಿಗೆ ಇದ್ದುದು ಒಂದೇ ಕಿಟಕಿ; ಅದು ಕೂಡ ದಿನವೂ ಮುಚ್ಚಿಕೊಂಡಿರುತ್ತಿತ್ತು. ದಿನಗಳು ಹೀಗೆಯೇ ಹೊರಳುತ್ತಿದ್ದವು.
ಒಂದು ದಿನ ಕೋಣ ಎಂದಿನಂತೆ ಮೇಯಲು ಹೊರಟು ಗುಡಿಸಲಿನ ಬಳಿ-ಬಂದಾಗ ಕಿಟಕಿಯನ್ನು ಕಂಡು ಅದರ ಕಣ್ಣುಗಳು ಮಿರಿಮಿರಿ ಮಿನುಗಿದವು.
ಏಕೆಂದರೆ ಅಂದು ಕಿಟಕಿ ತೆರೆದಿತ್ತು. ಕೋಣ ತನ್ನ ಕೊಂಬುಗಳು ಕಿಟಕಿಯ ಸರಳುಗಳ ನಡುವೆ ಸಿಕ್ಕಿ ಹಾಕಿಕೊಳ್ಳದಂತೆ ಮೆಲ್ಲನೆ ಒಳಗೆ ಇಣುಕಿತು. ಅಲ್ಲಿನೋಡಿದರೆ, ಆದರೆಣಿಕೆ ನಿಜವಾಗಿತ್ತು; ಬೈಹುಲ್ಲು ಸೂಡಿಗಳ ರಾಶಿಯೇ ಅಲ್ಲಿತ್ತು. ಕೋಣ ಇನ್ನಷ್ಟು ಎಚ್ಚರಿಕೆಯಿಂದ ತಲೆಯನ್ನು ಕಿಟಕಿಯ ಒಳಕ್ಕೆ ತೂರಿಸಿತು. ಉಹುಂ, ಬೈಹುಲ್ಲು ಎಟುಕಲೊಲ್ಲದು. ಅದು ಮತ್ತಷ್ಟು ತಿಣುಕಾಡಿ ಮುಖ ಮತ್ತು ಮುಂಗಾಲುಗಳನ್ನೂ ಒಳಕ್ಕೆ ತೂರಿಸಿತು. ಇಲ್ಲ. ಬೈಹುಲ್ಲು ರಾಶಿ ಇನ್ನೂ ದೂರವಿದೆ. ಮತ್ತೂ ಒದ್ದಾಡಿ ಎದೆ.
ಹೊಟ್ಟೆ ಹಿಂಗಾಲುಗಳನ್ನೂ ಒಳಕ್ಕೆ ತಂದಿತು. ಈಗ ಕೋಣ ಪೂರ್ತಿಯಾಗಿ ಗುಡಿಸಲಿನ ಒಳಗಿದೆ. ಆದರೂ ಬೈಹುಲ್ಲು ರಾಶಿ ಎಟಕುತ್ತಿಲ್ಲ. ಯಾಕೆಂದರೆ, ಬಾಲ ಸಿಕ್ಕಿಹಾಕಿಕೊಂಡಿದೆ.
ಗುರುಗಳು ಕಥೆಯನ್ನು ಇಲ್ಲಿಗೆ ನಿಲ್ಲಿಸಿ, 'ಇದು ಸಾಧ್ಯವೇ' ಎಂದು ಪ್ರಶ್ನಿಸಿದರು.
ಶಿಷ್ಯರು, 'ಸಾಧ್ಯವೇ ಇಲ್ಲ ಕೋಣನ ದಡೂತಿ ದೇಹ ಗುಡಿಸಲಿನ ಒಳಗೆ ತೂರಿದೆ. ಬಾಲ ಪುಟ್ಟದು, ಅದು ಸಿಕ್ಕಿಹಾಕಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ' ಎಂದರು.
ಗುರುಗಳು 'ನೀವೂ ಕೋಣಗಳಂತೆಯೇ' ಎಂದು ಕಥೆ ಮುಗಿಸಿದರು.
ಭಗವಾನ್ ಬಾಹುಬಲಿಯ ಜೀವನದಲ್ಲಿ ಒಂದು ಪ್ರಸಂಗ ಬರುತ್ತದೆ. ಅಣ್ಣ ಭರತನೊಂದಿಗೆ ಯುದ್ಧ ಮಾಡಿ ಗೆದ್ದಸಂದರ್ಭದಲ್ಲಿ ಬಾಹುಬಲಿಗೆ ವೈರಾಗ್ಯ ಮೂಡುತ್ತದೆ. ನಿಂತ ನಿಲುವಿನಲ್ಲಿಯೇ ಆತ 14 ವರ್ಷಗಳ ಕಠಿನ ತಪಶ್ಚರ್ಯ ಕೈಗೊಳ್ಳುತ್ತಾನೆ. ಆದರೂ ಅವನಿಗೆ ಕೇವಲ ಜ್ಞಾನ ಪ್ರಾಪ್ತಿ ಆಗುವುದಿಲ್ಲ. ಕೊನೆಗೆ 'ಅಣ್ಣನಿಗೆ ತಲೆ ಬಾಗಲಾರೆ ಎಂಬ ಕ್ಷೇಶ ನಿನ್ನ ಮನದಲ್ಲಿದೆ. ಅದು ನೀಗಿದರೆ ಕೇವಲ ಜ್ಞಾನ ಪ್ರಾಪ್ತಿ ಯಾಗುತ್ತದೆ' ಎಂದು ಅಶರೀರವಾಣಿಯಾಯಿತು. ಆ ಒಂದು ಸಣ್ಣ ಅಡ್ಡಿನೀಗಿದೊಡನೆಯೇ ಬಾಹುಬಲಿಗೆ ಜ್ಞಾನೋದಯವಾಯಿತು.
ನಮ್ಮೆಲ್ಲರಿಗೆ ಇರುವ ತೊಂದರೆಯೂ ಇದುವೇ. ಬದುಕಿನ ಒಂದು ಆಯಾಮದಿಂದ ಇನ್ನೊಂದು ಆಯಾಮಕ್ಕೆ ಹೊರಳಿಕೊಳ್ಳುವಾಗ ಯಾವುದೋ ಒಂದು ಸಣ್ಣ ಎಳೆ ಮುಂದಕ್ಕೆ ಹೋಗಲು ಆಗದಂತೆ ಹಿಡಿದಿಡುತ್ತದೆ. ಗಾಢವಾದ ಒಂದು ನೆನಪು, ದಿನವೂ ಮಲಗುತ್ತಿದ್ದ ಹಾಸಿಗೆ, ಕಲಿತ ಒಂದು ಸಂಗತಿ...
ಹೀಗೆ ನಮಗೆ ಗೊತ್ತೇ ಇಲ್ಲದ ಹಾಗೆ ಒಂದು ಸಣ್ಣ ಎಳೆ ಕಟ್ಟಿಹಾಕುತ್ತದೆ.
ಇಡೀ ದೇಹ ಕಿಟಕಿಯ ಮೂಲಕ ತೂರಿ ಒಳಗೆ ಹೋದರೂ ಬಾಲ ಸಿಕ್ಕಿ ಹಾಕಿಕೊಳ್ಳುವುದು ಹೀಗೆ ಇದು ಬಾಲ ಕತ್ತರಿಸುವ ಸಮಯ...