Skip to main content
Maya Mukti Logo
MAYA MUKTI
ಸ್ವಯಂ ಅರಿವು
Vedantic Parable•3 min read

ಅಂತರ್ಮುಖಿ ಆಗುವುದು ಎಂದರೆ.....

Jyothi shetty
Jyothi shettyVedantic Wisdom Tradition
ಅಂತರ್ಮುಖಿ ಆಗುವುದು ಎಂದರೆ.....
ನಾವು ಯಾವುದೋ ಆಸೆಗಳ ಬೆನ್ನುಹತ್ತಿ ಓಡುತ್ತಲೇ ಇದ್ದೇವೆ. ಓಡಿ ಓಡಿ ಪದೇ ಪದೆ ನಿರಾಶೆಯನ್ನೇ ಎದುರಿಸುತ್ತಿದ್ದೇವೆ. ಪ್ರತಿಯೊಂದು ಆಸೆಯೂ ದುಃಖವನ್ನು ತರುತ್ತದೆ. ಆ ಆಸೆಯ ಬೆನ್ನು ಹತ್ತಿ ನಾವು ಎಲ್ಲಿಗೂ ತಲುಪುವುದಿಲ್ಲ. ಅದರಿಂದ ನೆಮ್ಮದಿ ಎಂಬುದು ಅಸಾಧ್ಯ. ಆಸೆಗಳ ಬೆನ್ನಟ್ಟಿ ಓಡುವುದು ನಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ ಎಂಬ ಸತ್ಯವನ್ನು ಕಂಡುಕೊಂಡಾಗ, ನಾವು ನಿಲ್ಲುತ್ತೇವೆ. ನಾವು ಒಳಗಡೆ ಹೋಗಲು ಪ್ರಯತ್ನಿಸುತ್ತಿದ್ದರೆ, ನಾವು ಇನ್ನೂ ಹೊರಗಡೆಗೇ ಹೋಗುತ್ತಿದ್ದೇವೆ ಎಂದರ್ಥ. ಯಾವುದೇ ಪ್ರಯತ್ನವಾದರೂ ಅದು ನಮ್ಮನ್ನು ಹೊರಗಡೆಗೇ ಕರೆದೊಯ್ಯುತ್ತದೆ. ಎಲ್ಲ ಪ್ರಯಾಣಗಳು ಕೂಡ ಬಾಹ್ಯ ಪ್ರಯಾಣಗಳೇ ಆಗಿರುತ್ತವೆ, ಒಳಗಡೆಗೆ ಯಾವುದೇ ಪ್ರಯಾಣ ಇಲ್ಲ ಒಳಗಡೆಗೆ ಹೇಗೆ ತಾನೇ ಪ್ರಯಾಣಿಸಲು ಸಾಧ್ಯ? ನಾವು ಈಗಾಗಲೇ ಅಲ್ಲೇ ಇದ್ದೇವೆ. ಹಾಗಾಗಿ ಅಲ್ಲಿಗೆ ಹೋಗುವುದು ಎನ್ನುವುದರಲ್ಲಿ ಅರ್ಥವಿಲ್ಲ. ಯಾವಾಗ ಹೋಗುವುದು ನಿಲ್ಲುತ್ತದೆಯೋ, ಆಗ ಪ್ರಯಾಣವು ಇಲ್ಲವಾಗುತ್ತದೆ; ಯಾವಾಗ ಆಸೆಗಳು ನಮ್ಮ ಮನಸ್ಸನ್ನು ಮಬ್ಬುಗೊಳಿಸುವುದಿಲ್ಲವೋ, ಆಗ ನಾವು ಒಳಗಿರುತ್ತೇವೆ. ಇದೇ 'ಒಳಮುಖವಾಗುವುದು'. ಆದರೆ ಭಾಷೆಯಲ್ಲಿ ಇಂತಹ ವಿಷಯಗಳನ್ನು ವ್ಯಕ್ತಪಡಿಸುವುದು ಕಷ್ಟ ಒಂದು ಪುರಾತನ ಕಥೆ ಹೀಗಿದೆ. ಒಂದು ಸುಂದರವಾದ ಮಧ್ಯಾಹ್ನ ಒಂದು ಆಮೆ ನೆಲದ ಮೇಲೆ ನಡೆದಾಡಲು ಹೋಯಿತು. ಅದು ಸೂರ್ಯನ ಬೆಳಕಿನಿಂದ ಕೂಡಿದ ಮರಗಳ ಕೆಳಗೆ ವಿಶ್ರಾಂತಿ ಪಡೆಯಿತು ಮತ್ತು ಕೇವಲ ಸಂತೋಷಕ್ಕಾಗಿ ಪೊದೆಗಳ ಸುತ್ತಲೂ ಅಲೆದಾಡಿತು. ಅನಂತರ ಅದು ಮರಳಿ ಕೊಳದತ್ತ ಬಂತು. ಆಗ ಒಂದು ಮೀನು ಕೇಳಿತು, 'ನೀನು ಎಲ್ಲಿಗೆ ಹೋಗಿದ್ದೆ?' ಆಮೆ ಹೇಳಿತು, 'ನಾನು ನೆಲದ ಮೇಲೆ ನಡೆದಾಡಲು ಹೋಗಿದ್ದೆ' ಮೀನು ಕೇಳಿತು, 'ನೆಲದ ಮೇಲೆ ನಡೆದಾಡುವುದು ಎಂದರೆ...?' ಆಮೆ ಹೇಳಿತು, 'ಪಾದಗಳನ್ನು ಊರಿ ಮುಂದೆ ಮುಂದೆ ಹೋಗುವುದು...' 'ಅಂದರೆ ನೀನು ಈಜಾಡಲು ಹೋಗಿದ್ದೆ ಎಂದು ಹೇಳುತ್ತಿರಬೇಕು' ಎಂದಿತು ಮೀನು. ಆಮೆ ನಕ್ಕು ಹೇಳಿತು, 'ಇಲ್ಲ, ಅದು ಈಜುವುದು ಅಲ್ಲ ಅದು ಈಜುವಿಕೆಗೆ ಹತ್ತಿರದ್ದೂ ಅಲ್ಲ. ಅದು ಗಟ್ಟಿಯಾದ ನೆಲದ ಮೇಲಿನ ನಡಿಗೆ. ಒಂದು ಬೇರೆಯದೇ ಸಂಗತಿ.' ಮೀನು ಹೇಳಿತು, 'ನೀನು ತಮಾಷೆ ಮಾಡುತ್ತಿದ್ದೀಯಾ. ನಾನು ಎಲ್ಲ ಜಾಗಗಳಿಗೂ ಹೋಗಿದ್ದೇನೆ. ಅಲ್ಲಿ ಎಲ್ಲೆಂದರಲ್ಲಿ ಈಜಬಹುದು. ಈಜಲು ಸಾಧ್ಯವಾಗದ ಯಾವುದೇ ಜಾಗವನ್ನು ನಾನು ನೋಡಿಯೇ ಇಲ್ಲ. ನೀನು ಹುಚ್ಚುಚ್ಚಾಗಿ ಮಾತನಾಡುತ್ತಿದ್ವಿ' ಮೀನಿನ ಕಷ್ಟ ಏನೆಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮೀನು ಎಂದಿಗೂ ನೆಲದ ಮೇಲೆ ಇರಲಿಲ್ಲ ಎಂದಿಗೂ ನಡೆದಾಡಿಲ್ಲ. ಹಾಗೊಂದು ವಿಷಯದ ಕಲ್ಪನೆಯೇ ಅದಕ್ಕಿಲ್ಲ. ಹಾಗಾಗಿ ಅದರ ಪಾಲಿಗೆ ನೆಲದ ಮೇಲೆ ನಡೆಯುವುದು ಎನ್ನುವುದಕ್ಕೆ ಅರ್ಥವೇ ಇಲ್ಲ. ಆಮೆ ತನ್ನ ಹೇಳಿಕೆಯನ್ನು ಮೀನಿಗೆ ಅರ್ಥವಾಗುವಂತೆ ಮಾಡಬೇಕೆಂದರೆ, 'ನಾನು ಗಟ್ಟಿಯಾದ ನೆಲದ ಮೇಲೆ ಈಜಲು ಹೋಗಿದ್ದೆ' ಎಂದು ಹೇಳಬೇಕಾಗುತ್ತದೆ. ಆದರೆ ಅದು ಅಸಂಬದ್ಧ ಆದರೆ ಮೀನಿಗೆ ಅರ್ಥವಾಗುವ ಏಕೈಕ ಪದವೆಂದರೆ 'ಈಜುವುದು' ಮಾತ್ರ. ನಾವು ಯಾವಾಗಲೂ ಇಲ್ಲೇ ಇರುತ್ತೇವೆ. 'ಇಲ್ಲಿ ಮತ್ತು ಈಗ' ಎನ್ನುವುದೊಂದೇ ವಾಸ್ತವ, ಬೇರೇನೂ ಇಲ್ಲ. ಆದರೆ ಆನೆ ಒಂದು ಕನಸನ್ನು ಸೃಷ್ಟಿಸಬಲ್ಲದು. ಆ ಆಸೆಯಲ್ಲಿ ನಾವು ಹೊರಗಡೆಗೆ ಚಲಿಸುತ್ತಲೇ ಇರುತ್ತೇವೆ. ಒಳಮುಖವಾಗುವುದು ಎಂದರೆ ಒಳಗಡೆಗೆ ಚಲಿಸುವುದಲ್ಲ. ಯಾವುದೇ ಚಲನೆ ಇಲ್ಲದಿದ್ದಾಗ, ಎಲ್ಲವೂ ನಿಶ್ಚಲವಾಗಿದ್ದಾಗ, ಎಲ್ಲವೂ ನಿಂತುಹೋದಾಗ ನಿಶ್ಚಲತೆ ಆವರಿಸುತ್ತದೆ. ಜಗತ್ತು ನಿಂತುಹೋಗುತ್ತದೆ. 'ಒಳಮುಖವಾಗುವುದು' ಎಂದರೆ ಇದೇ. ಯಾವುದು ಈಗಾಗಲೇ ನಿಜವಾಗಿದೆಯೋ, ಅದಠ ಬಗ್ಗೆ ಅರಿವು ಮೂಡುವುದು, ಎಚ್ಚರಗೊಳ್ಳುವುದು.