Vedantic Parable•2 min read
Santhanendhare Yaru
Srikanth RaoVedantic Wisdom Tradition
ಸಂತನೆಂದರೆ ಯಾರು ದಿವ್ಯತೆಯ ಅರಿತವನು
ಸರಳತೆಯ ಸೂತ್ರದಲಿ ಸುಖವ ಕಂಡವನು
ಮಮತೆ ಬಂಧನ ಕಳಚಿ ಬಲು ದೂರ ನಿಂತವನು
ಎಲ್ಲರಲಿ ಅವನೊಬ್ಬ ಮುದ್ದುರಾಮ
ಸಿದ್ಧನೆಂದರೆ ಯಾರು ಮನವ ನೋಯಿಸದಾತ
ನೂರು ನೋವನು ಸಹಿಸಿ ನಗುತಲಿರುವಾತ
ಒಂದಾದ ನಡೆ ನುಡಿಗೆ ದಿಕ್ಕು ದೆಸೆ ತೋರ್ವಾತ
ಪರಮಗುರು ಆ ಸಾಧು ಮುದ್ದುರಾಮ
ಬೇಕು ಬೇಡಗಳಿಲ್ಲಾ ಕೋಪ ತಾಪಗಳಿಲ್ಲ
ಹುಸಿಮಾತು ಬಿರುನುಡಿಗಳೊಂದಿಲ್ಲ ಮನದಿ
ತನ್ನದೆನುವುದನೆಲ್ಲ ಮರೆತು ನಿಂತವ ಆತ
ಸಂತನೆಂದರೆ ಯೋಗಿ ಮುದ್ದುರಾಮ
ನಾ ಕಿರಿದು ನೀ ಹಿರಿದು ಎಂದವನೆ ನಿಜಯೋಗಿ
ಜಾತಿ ಮತ ಪಥದಿಂದ ದೂರ ಅವನಾತ್ಮ
ಸೇವಕನ ಭಾವದಲಿ ನಿಂತರದು ದಿಗ್ವಿಜಯ
ಶರಣ ಶಿವ ಕಿಂಕರನೋ ಮುದ್ದುರಾಮ
ಅನುಭವದ ನೆಲೆಯಿಂದ ನಿಜವರಿತ ಸಿದ್ಧನಿಗೆ
ಉಪ್ಪರಿಗೆ ಹಂಗೇನು, ಬರಿ ಗುಡಿಸಲೇನು
ಕಲ್ಲು ಮಾಣಿಕವೆಲ್ಲ ನೋಟದಲಿ ಒಂದೇ ಬಗೆ
ಅವನಾತ್ಮ ನಿರ್ಮಲವೋ ಮುದ್ದುರಾಮ
ಬಿತ್ತಿ ಭಕ್ತಿಯ ಬೀಜ, ಶ್ರದ್ಧೆ ನೇಗಿಲ ಬಳಸಿ
ಉಳುಮೆ ನೀ ಮಾಡುತಿರು ದುಡಿಮೆ ಎತ್ತಿಂದ
ತೋರು ಸರಿ ಆ ಶಕ್ತಿ, ಮುಕ್ತಿ ಫಲ ಬೆಳೆಸಿನಲಿ
ಯೋಗಿಪುಂಗವನಾಗು ಮುದ್ದು ರಾಮ