Skip to main content
Maya Mukti Logo
MAYA MUKTI
ಸ್ವಯಂ ಅರಿವು
Vedantic Parable•3 min read

ಅತಿಯಾದ ಆಲೋಚನೆ: ಬದುಕಿನ ಲಯಕ್ಕೆ ಅಡ್ಡಿ - ಜರಿ ಮತ್ತು ಕಪ್ಪೆ ಕಥೆ

Weboptify
WeboptifyVedantic Wisdom Tradition
ಅತಿಯಾದ ಆಲೋಚನೆ: ಬದುಕಿನ ಲಯಕ್ಕೆ ಅಡ್ಡಿ - ಜರಿ ಮತ್ತು ಕಪ್ಪೆ ಕಥೆ
ಒಂದು ಸುಂದರವಾದ ಕಾಡು. ಅಲ್ಲಿ ಮಳೆ ಬಿದ್ದಾಗ ಬರುವ ಮಣ್ಣಿನ ವಾಸನೆ, ಹಸಿರು ಗಿಡಗಳು—ಒಂತರಾ ನೆಮ್ಮದಿ. ಅಲ್ಲಿ ಒಂದು ಕಲ್ಲು ಇತ್ತು. ಆ ಕಲ್ಲಿನ ಮೇಲೆ ಒಂದು ದೊಡ್ಡ ಕಣ್ಣಿನ ಕಪ್ಪೆ ಆರಾಮವಾಗಿ ಕುಳಿತಿತ್ತು. ಆ ದಾರಿಯಲ್ಲಿ ಸಾಲು ಸಾಲು ಇರುವೆಗಳು, ದುಂಬಿಗಳು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಹೋಗುತ್ತಿದ್ದವು. ಅಷ್ಟರಲ್ಲಿ ಅಲ್ಲಿಗೆ ಒಂದು ಜರಿ (ಸಾವಿರ ಕಾಲುಗಳ ಹುಳು) ಬಂತು. ಅದು ಎಷ್ಟು ಚೆನ್ನಾಗಿ ನಡಿಯುತ್ತಿತ್ತು ಅಂದರೆ, ಸಾವಿರ ಕಾಲುಗಳಿದ್ದರೂ ಒಂದು ಕಾಲು ಇನ್ನೊಂದಕ್ಕೆ ತಗುಲುತ್ತಿರಲಿಲ್ಲ. ನೀರಿನ ಅಲೆಯ ತರಹ ಲಯಬದ್ಧವಾಗಿ ಚಲಿಸುತ್ತಿತ್ತು. ಕಪ್ಪೆಗೆ ಇದನ್ನು ನೋಡಿ ಆಶ್ಚರ್ಯವಾಯಿತು! ಕಪ್ಪೆ ಕೇಳಿತು, *"ಜರಿರಾಯರೇ, ನನಗಿರುವುದು ನಾಲ್ಕೇ ಕಾಲು. ನನಗೆ ನಡೆಯೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ. ಆದರೆ ನಿಮಗೆ ಸಾವಿರ ಕಾಲುಗಳಿವೆ! ನೀವು ಯಾವ ಕಾಲು ಮೊದಲು ಇಡಬೇಕು, ಯಾವುದು ಆಮೇಲೆ ಇಡಬೇಕು ಅಂತ ಹೇಗೆ ತೀರ್ಮಾನ ಮಾಡ್ತೀರಿ? ನಿಮಗೆ ಕನ್ಫ್ಯೂಸ್ ಆಗಲ್ವಾ?"* ಅಲ್ಲಿಯವರೆಗೆ ಜರಿ ಇವೆಲ್ಲದರ ಬಗ್ಗೆ ಯೋಚನೆಯೇ ಮಾಡಿರಲಿಲ್ಲ. ಕಪ್ಪೆಯ ಪ್ರಶ್ನೆ ಕೇಳಿದ ತಕ್ಷಣ ಜರಿ ಅಲ್ಲೇ ನಿಂತುಬಿಟ್ಟಿತು. ಜರಿ ಯೋಚನೆ ಮಾಡೋಕೆ ಶುರುಮಾಡಿತು: *"ಹೌದಲ್ಲ! ನಾನು ಈ ಕಾಲುಗಳನ್ನು ಹೇಗೆ ನಡೆಸುತ್ತಿದ್ದೇನೆ? ಮೊದಲು ಎಡಗಡೆಯ ಕಾಲು ಎತ್ತಬೇಕಾ? ಅಥವಾ ಬಲಗಡೆಯದಾ? ಮುಂದಿನ ಕಾಲು ಮುಂದಕ್ಕೆ ಹೋದಾಗ ಹಿಂದಿನ ಕಾಲು ಎಲ್ಲಿರಬೇಕು?"* ಜರಿ ಎಷ್ಟು ಹೆಚ್ಚಾಗಿ ಯೋಚಿಸಿತೋ, ಅಷ್ಟು ಅದರ ಕಾಲುಗಳು ಭಾರವಾದವು. ಒಂದಕ್ಕೊಂದು ಸಿಕ್ಕಿಹಾಕಿಕೊಂಡವು. ನಡೆಯೋಕೆ ಪ್ರಯತ್ನಪಟ್ಟರೆ ಕಾಲುಗಳು ಕಲ್ಲಿನಂತೆ ಜಡವಾಗಿಬಿಟ್ಟವು! ಸಾವಿರ ಕಾಲುಗಳಿದ್ದರೂ ಜರಿ ಈಗ ಒಂದು ಹೆಜ್ಜೆ ಇಡಲೂ ಆಗದೆ ಒದ್ದಾಡುತ್ತಿತ್ತು. (ನಾವು ಸೈಕಲ್ ಕಲಿಯುವಾಗ ಅಥವಾ ಓಡುವಾಗ "ಕಾಲು ಹೇಗೆ ಇಡಬೇಕು" ಅಂತ ಯೋಚಿಸಿದರೆ ಬಿದ್ದುಬಿಡುತ್ತೇವೆ. ಆದರೆ ಸುಮ್ಮನೆ ಇದ್ದರೆ ನಮ್ಮ ಶರೀರಕ್ಕೆ ಹೇಗೆ ಮಾಡಬೇಕು ಅಂತ ಸಹಜವಾಗಿ ಗೊತ್ತು.) ಪಾಪ, ಕಪ್ಪೆ ಅಂದುಕೊಂಡಿತು, *"ಅಯ್ಯೋ, ನಾನು ಸುಮ್ಮನೆ ಕೇಳಿದೆ, ಈ ಜರಿರಾಯರು ಯಾಕೆ ಹೀಗೆ ನಿಂತುಬಿಟ್ಟರು?"* ಬಹಳ ಹೊತ್ತಿನವರೆಗೆ ಜರಿ ಅಲ್ಲೇ ಇತ್ತು. ಕೊನೆಗೆ ಅದಕ್ಕೆ ಯೋಚನೆ ಮಾಡಿ ಸಾಕಾಯಿತು. *"ಛೇ! ಈ ಯೋಚನೆ ಸಾಕಪ್ಪಾ"* ಅಂತ ಆ ಪ್ರಶ್ನೆಯನ್ನೇ ಕೈಬಿಟ್ಟಿತು. ತಾನು ಯಾರು, ಹೇಗೆ ನಡಿಯಬೇಕು ಅನ್ನೋದನ್ನೆಲ್ಲಾ ಮರೆತು ಸುಮ್ಮನೆ ಇತ್ತು. ಅಷ್ಟೇ! ಯಾವಾಗ ಜರಿ ತನ್ನ ತಲೆ ಉಪಯೋಗಿಸೋದನ್ನ ಬಿಟ್ಟಿತೋ, ಅದರ ಕಾಲುಗಳು ತನ್ನಷ್ಟಕ್ಕೆ ತಾನೇ ಚಲಿಸಲು ಶುರುಮಾಡಿದವು! ಹಳೆಯ ವೇಗ, ಹಳೆಯ ಲಯ ಮತ್ತೆ ಬಂತು. ಜರಿ ನಗುತ್ತಾ ತನ್ನ ಹಾದಿಯಲ್ಲಿ ಮುಂದೆ ಹೋಯಿತು. ಕಪ್ಪೆಗೆ ಒಂದು ಸತ್ಯ ಅರ್ಥವಾಯಿತು — *ಬದುಕು ಅನ್ನೋದು ಯೋಚನೆ ಮಾಡೋ ವಿಷಯ ಅಲ್ಲ, ಅದು ಬದುಕುವ ವಿಷಯ.* ಸಹಜವಾಗಿರಿ... ಸೂರ್ಯ ಉದಯಿಸಲು, ಹೂವು ಅರಳಲು ಯಾವ ತರಬೇತಿಯೂ ಬೇಕಿಲ್ಲ. ಹಾಗೆಯೇ ನೀವು 'ನೀವಾಗಿರಲು' ಯಾವ ಪ್ರಯತ್ನವೂ ಬೇಕಿಲ್ಲ... *ಕೊನೆಯ ಮಾತು:* ಜರಿ ತನ್ನ ಕಾಲುಗಳನ್ನು ಮರೆತಾಗ ಸುಂದರವಾಗಿ, ಸಹಜವಾಗಿ ನಡೆಯಿತು. ನೀವು ನಿಮ್ಮ ಬದುಕು ಸುಂದರವಾಗಲು *"ನಾನು ಏನು ಮಾಡಬೇಕು"* ಎಂಬ ಯೋಚನೆಗಳನ್ನು ಮರೆತಾಗ ನಿಮ್ಮ ಜೀವನವೂ ಸುಂದರವಾಗಿ ಸಾಗುತ್ತದೆ. ಇದೇ *ಮಾಯಾ ಮುಕ್ತಿ.*